ಖ್ಯಾತ ಕರ್ಣಾಟಕಗಳು	

	ಕನ್ನಡ ಭಾಷೆಯ ಶಾಸನಸಾಹಿತ್ಯದಲ್ಲಿಯೂ ಕಾವ್ಯಶಾಸ್ತ್ರಾದಿ ಗ್ರಂಥರಾಶಿಯಲ್ಲಿಯೂ ಇತರ ವರ್ಣವೃತ್ತಗಳಿಗಿಂತ ಹೆಚ್ಚು ಬಳಕೆಯಾಗಿರುವ ಶಾರ್ದೂಲವಿಕ್ರೀಡಿತ. ಮತ್ತೇಭವಿಕ್ರೀಡಿತ, ಉತ್ಪಲಮಾಲೆ, ಚಂಪಕ ಮಾಲೆ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ ಎಂಬ ಆರು ಸಮಚತುಷ್ಪದೀ ವರ್ಣವೃತ್ತಗಳನ್ನು ಈ ಹೆಸರಿಂದ ಕರೆಯುವುದು ರೂಢಿಯಾಗಿದೆ. ಈ ಮಾತಿಗೆ ಮೂಲವಾವುದು ಎಂಬುದು ವಿಚಾರಣೀಯ.

	ನಾಗವರ್ಮನ (ಸು.990) ಛಂದೋಂಬುಧಿಯ ಕೆಲವು ಹಸ್ತಪ್ರತಿಗಳಲ್ಲಿ, ಸಮವೃತ್ತವಿವರಣೆಯ ದ್ವಿತೀಯಾಧಿಕಾರದ ಅಂತ್ಯಭಾಗದಲ್ಲಿ ಹೀಗೆ ಒಂದು ಪದ್ಯವಿದೆ:

	ಗುರುವೊಂದಾದಿಯೊಳುತ್ಪಲಂ ಗುರು ಮೊದಲ್ ಮೂರೂಗೆ ಶಾರ್ದೂಲಮಾ 
	ಗುರು ನಾಲ್ಕಾಗಿರಲಂತೆ ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ 
	ಗಿರಿ ಮತ್ತೇಭ ಲಘುದ್ವಯತ್ರಿಗುರುವಿಂದಕ್ಕುಂ ಮಹಾಸ್ರಗ್ಧರಂ
	ಹರಿಣಾಕ್ಷೀ ಲಘು ನಾಲ್ಕು ಚಂಪಕಮಿವಾರಿಂ ಖ್ಯಾತ ಕಾರ್ಣಾಟಿಕಂ||

	ಇದರಲ್ಲಿ ಪೂರ್ವೋಕ್ತವಾದ ಆರು ವೃತ್ತಗಳ ಸ್ವರೂಪವನ್ನು ಶೀಘ್ರವಾಗಿ ತಿಳಿಯುವುದಕ್ಕೆ ಅನುಸರಿಸಬಹುದಾದ ಸುಲಭೋಪಾಯವನ್ನು ಸೂಚಿಸಿದೆ. ಆದರೆ ಈ ಪದ್ಯಛಂದೋಂಬುಧಿಯ ಮೂಲಪಾಠದೊಳಗಿನದಲ್ಲ, ಈಚೆಗೆ ಯಾರೋ ಸೇರಿಸಿದ್ದು ಎಂದು ಊಹಿಸಬಹುದು. ಆ ಕಾಲದಿಂದೀಚೆಗೆ ಮೇಲಿನ ಆರು ವೃತ್ತಗಳಿಗೂ ಖ್ಯಾತ ಕರ್ಣಾಟಕಗಳು ಎಂಬ ಮಾತು ಪ್ರಚಲಿತವಾಗಿರಬೇಕು. ಆ ವೃತ್ತಗಳ ಪ್ರಸಿದ್ಧಿಗೆ ಕೆಲವು ಕಾರಣಗಳಿವೆ. ಕನ್ನಡ ಚಂಪೂಕಾವ್ಯಗಳಲ್ಲಿ ಕಂದ ಮತ್ತು ಗದ್ಯಖಂಡಗಳನ್ನು ಬಿಟ್ಟರೆ, ಬಹುವಿರಳವಾಗಿ ಬರುವ ಕೆಲವು ಅನ್ಯ ವರ್ಣವೃತ್ತಗಳು ಮತ್ತು ದೇಶ್ಯವೃತ್ತಗಳನ್ನು ಬಿಟ್ಟರೆ, ಉಳಿಯುವ ವೃತ್ತಗಳು ಎಂದರೆ ಶಾರ್ದೂಲ ವಿಕ್ರೀಡಿತಾದಿಗಳೇ. ಚಂಪೂ ಕಾವ್ಯವೆಂದರೆ ಮುಕ್ಕಾಲು ಪಾಲು ಕಂದ, ಕಾಲುಪಾಲು ಈ ಆರುವೃತ್ತಗಳು ಎಂಬ ಮಾತಿದೆ. ಇಷ್ಟು ಮಾತ್ರವಲ್ಲದೆ, ಕನ್ನಡ ಶಾಸನಗಳಲ್ಲಿಯೂ ವೃತ್ತಕಂದಗಳೋ ವೃತ್ತಗಳೋ ಮಾತ್ರವೇ ಬಳಕೆಯಾಗಿರುವ ಶಾಸ್ತ್ರ ಮತ್ತು ಶತಕಗಳಂಥ ಕೃತಿಗಳಲ್ಲಿಯೂ ಈ ಆರು ವೃತ್ತಗಳಲ್ಲಿ ಯಾವುದಾದರೊಂದನ್ನೋ ಕೆಲವನ್ನೋ ಸಾಮಾನ್ಯವಾಗಿ ಬಳಸಿರುವುದು ಕಂಡುಬರುತ್ತದೆ.

	ಖ್ಯಾತ ಕರ್ಣಾಟಕಗಳು ಕನ್ನಡ ಸಾಹಿತ್ಯೋದಯದ ತೀರ ಮೊದಮೊದಲಿನ ಕಾಲದಲ್ಲೇ ಸಂಸ್ಕøತ ಭಾಷಾಸಾಹಿತ್ಯಗಳ ಪ್ರಭಾವದಿಂದಾಗಿ ರೂಢಿಗೆ ಬಂದು, ನೆಲೆನಿಂತು, ಅನಂತರ ಗಾಢವಾಗಿ ವ್ಯಾಪಿಸಿದಂತೆ ತೋರುತ್ತದೆ. ಸು. ಏಳನೆಯ ಶತಮಾನದವೆಂದು ಗುರುತಿಸಿರುವ ಶ್ರವಣಬೆಳಗೊಳದ ಶಾಸನಗಳ ಕಾಲಕ್ಕಾಗಲೇ ಈ ವೃತ್ತಗಳೆಲ್ಲ ಕಂಡುಬರುತ್ತವೆ. ಕವಿರಾಜಮಾರ್ಗದಿಂದೀಚಿನ ಕೃತಿಗಳಲ್ಲಿ ಕಾಣುವುದಂತೂ ಸರಿಯೇ. ಸಂಸ್ಕøತ ಭಾಷಾ ಮರ್ಯಾದೆಗೆ ಒಗ್ಗಿದಂಥ ಈ ವೃತ್ತಗಳು ಕನ್ನಡದ ಜಾಯಮಾನಕ್ಕೆ ಕೂಡ ಒಗ್ಗುವಚಿತಾದುದು ಆ ಭಾಷೆಯ ಮೇಲೆ ಸಂಸ್ಕøತದ ವರ್ಚಸ್ಸು ಎಷ್ಟರಮಟ್ಟಿಗೆ ಬಿದ್ದಿತೆನ್ನುವುದನ್ನು ವ್ಯಕ್ತಗೊಳಿಸುತ್ತದೆ.

	ಹೆಸರಿನ ರೀತಿಯಿಂದಾಗಿ ಶಾರ್ದೂಲವಿಕ್ರೀಡಿತ-ಮತ್ತೇಭವಿಕ್ರೀಡಿತಗಳು, ಉತ್ಪಲ ಮಾಲೆ-ಚಂಪಕಮಾಲೆಗಳು, ಸ್ರಗ್ಧರೆ-ಮಹಾಸ್ರಗ್ಧರೆಗಳು ಸಹಜವಾಗಿಯೇ ಜೋಡಿಗೊಳ್ಳತ್ತವೆ ಅವು ಪ್ರಾಯಶಃ ಒಂದನ್ನೊಂದು ಹೋಲುವ ಒಂದು ಗುಂಪಿನ ವೃತ್ತಗಳಿರಬಹುದೆಂಬ ಸಂಶಯವನ್ನು ಉಂಟುಮಾಡುತ್ತವೆ. ಅವುಗಳ ಲಕ್ಷಣ ವಿಮರ್ಶೆಯಿಂದ ಆ ಸಂಶಯ ದೂರವಾಗಿ ಪರಸ್ಪರ ಸಂಬಂಧವೂ ಮನವರಿಕೆಯಾಗುತ್ತದೆ. ಅದನ್ನು ಮುಂದೆ ಗಮನಿಸಬಹುದು. ಪ್ರಸ್ತುತ, ವರ್ಣವೃತ್ತದ ಪ್ರಸ್ತಾರ ವಿಧಾನವನ್ನು ಅನ್ವಯಿಸಿ ಆ ವೃತ್ತಗಳ ಲಕ್ಷಣವನ್ನು ಸಂಸ್ಕøತ ಹಾಗೂ ಕನ್ನಡ-ತೆಲುಗು ಛಂದೋಗ್ರಂಥಗಳಲ್ಲಿ ಸೂತ್ರರೂಪವಾಗಿಯೋ ಲಕ್ಷಣ-ಲಕ್ಷ್ಯಸಮೀಕರಣ ರೂಪವಾಗಿಯೋ ವಿವರಿಸಿರುವುದು ಕಂಡುಬರುತ್ತದೆ. ಶಾರ್ದೂಲವಿಕ್ರೀಡಿತ, ಚಂಪಕಮಾಲೆ ಮತ್ತು ಸ್ರಗ್ಧರೆಗಳ ಲಕ್ಷಣವನ್ನು ಪಿಂಗಲಾದ್ಯರೂ ಮತ್ತೇಭವಿಕ್ರೀಡಿತ, ಉತ್ಪಲಮಾಲೆ ಮತ್ತು ಮಹಾಸ್ರಗ್ಧರೆಗಳ ಲಕ್ಷಣವನ್ನು ಜಯಕೀತ್ರ್ಯಾದ್ಯರೂ ತಂತಮ್ಮ ಛಂದೋಗ್ರಂಥಗಳಲ್ಲಿ ವಿವರಿಸಿದ್ದಾರೆ. ಆದರೆ ಮೊದಲ ಮೂರರ ವಿವರಣೆಗೆ ದೊರೆತಿರುವ ಸ್ಥಾನ ಉಳಿದವುಗಳಿಗಿಲ್ಲ; ಮತ್ತೇಭ ಮೊದಲಾದ ಮೂರು ವೃತ್ತಗಳಿಗೆ ತಕ್ಕ ಪ್ರಾಚುರ್ಯವಾಗಲಿ ಪರಂಪರೆಯಾಗಲಿ ಸಂಸ್ಕøತ ಸಾಹಿತ್ಯದಲ್ಲಿ ಇಲ್ಲದಿರುವುದೇ ಬಲುಮಟ್ಟಿಗೆ ಅದರ ಕಾರಣ. ಈಗ ತಿಳಿದಿರುವಂತೆ ಸಂಸ್ಕøತ ಸಾಹಿತ್ಯದಲ್ಲಿ ರವಿಕೀರ್ತಿ ಕೃತವಾದ ಐಹೊಳೆಯ ಶಿಲಾಶಾಸನದಲ್ಲಿ (634) ಬರುವ ವರದಾತುಙ್ಗ ತರಙ್ಗ ರಙ್ಗವಿಲಸದ್ಧಂಸಾವಲೀ ಮೇಖಲಾಂ ಎಂಬುದಾಗಿ ಆರಂಭವಾಗುವ ಒಂದು ವೃತ್ತ ಮತ್ತು ವೆಂಕಟಾಧ್ವರಿಯ (1634) ಲಕ್ಷ್ಮೀಸಹಸ್ರನಾಮದೊಳಗಿನ ಕ್ಷಿಪತು ಕ್ಷಿಪ್ರಮನಲ್ಪಮಪ್ರತಿಹತಸ್ತಾಪತ್ರಯಂ ಮಾಮಕಮ್ ಮತ್ತು ಸರ್ವಾಪಕೃತಿಕ್ಷಮೇಪಿ ಕಲಯ ಸ್ವಾತೀವ ಶೀತಾಮ್ ದಯಾಂ ಎಂಬುದಾಗಿ ಆರಂಭವಾಗುವ ಎರಡು ವೃತ್ತಗಳು-ಇವು ಮಾತ್ರ ಮತ್ತೇಭ ವಿಕ್ರೀಡಿತಗಳೆಂದು ಗುರುತಿಸಲ್ಪಟ್ಟಿವೆ.

	ಮತ್ತೇಭವಾದಿಯಾದ ಮೂರು ವೃತ್ತಗಳೂ ಸಂಸ್ಕøತದಲ್ಲಿ ಪ್ರಸಿದ್ಧವಾಗಿಲ್ಲ ಎನ್ನವುದು ಸ್ಪಷ್ಟವೇ. ಆದರೆ ಶಾರ್ದೂಲವಾದಿಯಾದ ಮೂರರಲ್ಲಿ ಕೂಡ ಶಾರ್ದೂಲ, ಸ್ರಗ್ಧರೆಗಳು ಮಾತ್ರ ಸಂಸ್ಕøತದಲ್ಲಿ ಬಹುವ್ಯಾಪ್ತವಾಗಿದ್ದು, ಚಂಪಕಮಾಲೆಗೆ ಆ ಪ್ರಾಮುಖ್ಯವಿಲ್ಲವಾಗಿದೆ. ಚಂಪಕಮಾಲೆಯನ್ನು ಸಂಸ್ಕøತ ಛಂದೋಗ್ರಂಥಗಳಲ್ಲಿ ಶಶಿವದನಾ, ಚಿತ್ರಲತಾ, ರುಚಿರಾ, ಸರಸೀ, ಸಲಿಲನಿಧಿ, ಸಿದ್ಧಿ, ಧೃತಶ್ರೀ, ಪಂಚಕಾವಲೀ-ಎಂದು ಬೇರೆ ಬೇರೆ ಹೆಸರಿನಲ್ಲಿ ಲಕ್ಷಣಿಸಿದ್ದರೂ ಅದರ ನಿದರ್ಶನಗಳು ಮಾತ್ರ ಸಂಸ್ಕøತ ಸಾಹಿತ್ಯದಲ್ಲಿ ಬಹು ವಿರಳ. ಇದಕ್ಕೆ ಕಾರಣವೇನೋ ತಿಳಿಯದು. ಪೂರ್ವಚಾಳುಕ್ಯರಾಜ ಮೂರನೆಯ ಗುಣಗ ವಿಜಯಾದಿತ್ಯನ (844-88) ಸಾತಲೂರು ತಾಮ್ರಶಾಸನದೊಳಗಿನ ಅರಿನೃಪವಾಜಿವಾರಣಪಾದತಿ ಮಹಾಭ್ರ ವಿರಾಮಮಾರುತಃ ಎಂಬ ಹಾಗೂ ಮಾಘಕವಿಯ (ಸು.750) ಶಿಶುಪಾಲವಧೆಯೊಳಗಿನ ತುರಗಶತಾಕುಲಸ್ಯ ಪರಿತಃ ಪರಮೇಕತುರಂಗ ಜನ್ಮನಃ ಎಂಬ ಆರಂಭವಿರುವ ಎರಡು ವೃತ್ತಗಳೂ ವಾಮನ (ಸು. 750-800), ರಾಜಶೇಖರ (880-920) ಮುಂತಾದವರ ಅಲಂಕಾರಗ್ರಂಥಗಳೊಳಗಿನ ಹಾಗೂ ಅಮಿತಗತಿಯ ಸುಭಾಷಿತ ರತ್ನ ಸಂದೋಹ ಮೊದಲಾದ ಪದ್ಯಸಂಕಲನಗಳೊಳಗಿನ ಸುಮಾರು ಆರೇಳು ವೃತ್ತಗಳೂ ಚಂಪಕಮಾಲೆಯ ನಿದರ್ಶನಗಳಾಗಿ ಗೋಚರಿಸುತ್ತವೆ. ಹೀಗೆ ದೊರೆತ ನಿದರ್ಶನಗಳಲ್ಲಿ ಕೆಲವು ಕಡೆ ಛಂದಸ್ಸು ವ್ಯತ್ಯಾಸವಾಗಿರುವುದೂ ಉಂಟು. 

	ಕನ್ನಡ ಸಾಹಿತ್ಯದಲ್ಲಿ ಶಾರ್ದೂಲ ವಿಕ್ರೀಡಿತ ಮೊದಲಾಗಿ ಮೇಲಿನ ಆರು ವೃತ್ತಗಳೂ ಸಮಾನಾಗಿ ಗಣ್ಯವಾಗಿವೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚುಕಡಿಮೆಗಳಾಗುತ್ತಿದ್ದರೂ ಕನ್ನಡದ ಪ್ರಾಚೀನ ಚಂಪೂಕಾವ್ಯಗಳಲ್ಲಿ ಇವು ಮೇಲಿಂದ ಮೇಲೆ ಬರುತ್ತವೆ. ಈ ವೃತ್ತಗಳೂ ಕಂದವೂ ಗದ್ಯದೊಂದಿಗೆ ಕೂಡಿ ಚಂಪುವಿನ ಚೌಕಟ್ಟನ್ನು ರೂಪಿಸುತ್ತವೆ.

	ಪೂರ್ವೋಕ್ತ ವೃತ್ತಗಳ ಲಕ್ಷಣವನ್ನೂ ಕನ್ನಡ ಕೈಪಿಡಿಯ ಮೂಲಕ ಪ್ರಸಿದ್ಧವಾಗಿರುವ ನೆನಪಿನ ಸೂತ್ರಗಳನ್ನು ಹೀಗೆ ಸಂಗ್ರಹಿಸಬಹುದು (1) ಶಾರ್ದೂಲ ವಿಕ್ರೀಡಿತ : ಮಸಜಸತತಗ (ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲ ವಿಕ್ರೀಡಿತಂ) ; ಕ್ರಮವಾಗಿ 12ನೆಯ ಮತ್ತು ಅಲ್ಲಿಂದ 7ನೆಯ ಅಕ್ಷರಕ್ಕೆ ಯತಿ (2) ಮತ್ತೇಭವಿಕ್ರಿಡಿತ : ಸಭರನಮಯಲಗ (ಸಭರಂನಂಮಯಲಂಗÀಮುಂಬಗೆಗೊಳಲ್ ಮತ್ತೇವಿಭಕ್ರೀಡಿತಂ) ; ಕ್ರಮವಾಗಿ 13ನೆಯ ಮತ್ತು ಅಲ್ಲಿಂದ 7ನೆಯ ಅಕ್ಷರಕ್ಕೆ ಯತಿ ; (3) ಉತ್ಪಲಮಾಲೆ ಭರನಭಭರಲಗ (ಉತ್ಪಲ ಮಾಲೆಯಪ್ಪುದು ಭರಂನಭಭಂರಲಂಗಂ ನೆಗ¿õÉ್ದರಲ್) ; 11ನೆಯ ಅಕ್ಷರಕ್ಕೆ ಯತಿ (ನಾಗವರ್ಮನ ಛಂದೋಂಬುಧಿ). (4) ಚಂಪಕಮಾಲೆ: ನಜಭಜಜಸರ (ನಜಭಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್); ಕ್ರಮವಾಗಿ 11 ನೆಯ ಮತ್ತು ಅಲ್ಲಿಂದ 10ನೆಯ ಅಕ್ಷರಗಳಿಗೆ ಯತಿಯೆಂದು ಪಿಂಗಲ ಕೇದಾರ ಭಟ್ಟರೂ 13 ನೆಯ ಅಕ್ಷರಕ್ಕೆ ಎಂದು ನಾಗವರ್ಮನೂ ಹೇಳುತ್ತಾರೆ. (5) ಸ್ರಗ್ಧರೆ : ಮರಭನಯಯಯ (ತೋ¾ಲ್ ಮಂರಂಭನಂ ಮುಯಗಣಮುಮದೆತಾಂಸ್ರಗ್ಧ ರಾವೃತ್ತಮಕ್ಕುಂ) ; ಕ್ರಮವಾಗಿ 7, 7, 7ನೆಯ ಅಕ್ಷರಗಳಿಗೆ ಯತಿ. (6) ಮಹಾಸ್ರಗ್ಧರೆ : ಸತತನಸರಗ (ಸತತಂನಂಸಂರರಂಗಂ ನೆರೆದೆಸೆಯೆ ಮಹಾ ಸ್ರಗ್ಧರಾವೃತ್ತಮಕ್ಕುಂ) ; ಕ್ರಮವಾಗಿ 8, 7, 7ನೆಯ ಅಕ್ಷರಗಳಿಗೆ ಯತಿ (15ನೆಯ ಅಕ್ಷರಕ್ಕೆ ಯತಿಯೆಂದು ನಾಗವರ್ಮ). ಸಂಸ್ಕøತದಲ್ಲಿ ಯತಿ ನಿಯತ, ಕನ್ನಡದಲ್ಲಿ ಹಾಗೆ ನಿರ್ಬಂಧವಿಲ್ಲ. ನಾಗವರ್ಮ ಬಹುಮಟ್ಟಿಗೆ ಸಂಸ್ಕøತ ಪರಿಪಾಠಿಯನ್ನು ಅನುಸರಿಸಿ ಖ್ಯಾತಕರ್ಣಾಟಕಗಳಿಗೆ ಯತಿನಿರ್ದೇಶನವನ್ನು ಮಾಡಿದ್ದರೂ ಕವಿಗಳು ಯತಿನಿಯಮವನ್ನು ಬಿಟ್ಟಿದ್ದಾರೆ. ಖ್ಯಾತ ಕರ್ಣಾಟಕಗಳ ಗುಣಲಕ್ಷಣಾದಿ ವಿವರಗಳಿಗೆ -
(ನೋಡಿ- ಉತ್ಪಲಮಾಲಾ)
(ನೋಡಿ- ಚಂಪಕಮಾಲೆ)
(ನೋಡಿ- ಮತ್ತೇಭವಿಕ್ರೀಡಿತ) 
(ನೋಡಿ- ಮಹಾಸ್ರಗ್ಧರೆ) 
(ನೋಡಿ- ಶಾರ್ದೂಲವಿಕ್ರೀಡಿತ) 
(ನೋಡಿ- ಸ್ರಗ್ಧರೆ)

 	ಅಕ್ಷರಗಳಿಗೆ ನಿಯಮದಂತೆ ಪರಿಶೀಲಿಸಿದರೆ ಒಂದೊಂದು ವಿಭಿನ್ನ ಲಕ್ಷಣದ ವೃತ್ತಗಳಾಗಿ ತೋರುವ ಖ್ಯಾತ ಕರ್ಣಾಟಕಗಳ, ಗುರುಲಘುಗಳನ್ನು ಗುರುತಿಸಿ, ಧಾಟಿಯನ್ನು ಪರಿಶೀಲಿಸಿದರೆ ಮೂರು ಜೋಡಿಗಳಲ್ಲಿ ಹತ್ತಿರ ಹತ್ತಿರವಾಗುವುದು ಕಂಡುಬರುತ್ತದೆ. ಆ ಮೂರು ಜೋಡಿಗಳು ಇವು : ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತಗಳು ; ಉತ್ಪಲಮಾಲೆ, ಚಂಪಕಮಾಲೆಗಳು ; ಸ್ರಗ್ಧರೆ, ಮಹಾಸ್ರಗ್ಧರೆಗಳು, ಈಯಂಶವನ್ನು ಗಮನಿಸಿ ಉತ್ಪಲ, ಶಾರ್ದೂಲ, ಸ್ರಗ್ಧರೆ ಇವುಗಳ ಮೊದಲಿನ ಗುರುವಿಗೆ ಎರಡು ಲಘುಗಳನ್ನು ಇಟ್ಟು ಚಂಪಕ, ಮತ್ತೇಭ, ಮಹಾಸÀ್ರಗÀ್ಧರೆಗಳು, ಕನ್ನಡಕವಿಗಳು ಮಾಡಿಕೊಂಡಂತೆ ಕಾಣುವುದು ಎಂಬುದಾಗಿ ಒಂದು ಅಭಿಪ್ರಾಯ ವ್ಯಕ್ತಪಟ್ಟಿದೆ. ಸಂಸ್ಕøತದಲ್ಲಿ ಶಾರ್ದೂಲ ಮತ್ತು ಸ್ರಗ್ಧರೆಗಳು ಗಣ್ಯವೃತ್ತಗಳಾಗಿದ್ದು, ಅವನ್ನು ಕನ್ನಡಕ್ಕೆ ತಂದುಕೊಳ್ಳುವಾಗ ವೈವಿಧ್ಯವನ್ನೂ ಸೌಲಭ್ಯವನ್ನೂ ಹೆಚ್ಚಿಸಿಕೊಳ್ಳಲು ಅವುಗಳ ಆದಿಗುರುವಿಗೆ ದ್ವಿಲಘುವನ್ನಿಟ್ಟು ಆ ಧಾಟಿಯ ಇನ್ನೆರಡು ಹೊಸವೃತ್ತಗಳನ್ನು ಕಲ್ಪಿಸಿಕೊಂಡಿರುವುದು ಸಾಧ್ಯ ಎನ್ನುವುದನ್ನು ಬಲುಮಟ್ಟಿಗೆ ಒಪ್ಪಬಹುದು. ಆದರೆ ಉತ್ಪಲಮಾಲೆ ಸಂಸ್ಕøತದಲ್ಲಿ ಚಂಪಕಮಾಲೆಯಷ್ಟು ಕೂಡ ಪ್ರಸಿದ್ಧವಾಗಿದ್ದಂತೆ ತೋರದಿರುವುದರಿಂದ ಉತ್ಪಲದ_ಆದಿಗುರುವಿಗೆ ದ್ವಿಲಘುವನ್ನಿಟ್ಟು ಚಂಪಕವನ್ನು ಮಾಡಿಕೊಂಡಿದೆಯೆಂದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಚಂಪಕಮಾಲೆಯ ಆದಿ ದ್ವಿಲಘುವಿಗೆ ಗುರುವೊಂದನ್ನಿಟ್ಟು ಉತ್ಪಲಮಾಲೇಯನ್ನೇ ಹೊಸದಾಗಿ ಕಲ್ಪಿಸಿಕೊಂಡಿರಬಹುದು; ಯಾವುದೇ ಪ್ರಭಾವದಿಂದಾಗಲಿ ಕನ್ನಡ ಸಾಹಿತ್ಯದಲ್ಲಿ ಉತ್ಪಲಮಾಲೆ ರೂಢಿಗೆ ಬಂದ ಮೇಲೆ ಅದರ ಆದಿಗುರುವಿಗೆ ದ್ವಿಲಘುವನ್ನಿಟ್ಟು ಚಂಪಕ ಮಾಲೆಯನ್ನು ಮಾಡಿಕೊಂಡಿರಬಹುದು ; ಇಲ್ಲವೆ ಉತ್ಪಲಮಾಲೆ ಚಂಪಕಮಾಲೆಗಳು ಸ್ವತಂತ್ರವಾಗಿ ಕನ್ನಡದಲ್ಲಿ ಕಾಣಿಸಿಕೊಂಡಿರಬಹದು. ಸು 7ನೆಯ ಶತಮಾನದ ಕನ್ನಡ ಶಾಸನಗಳಲ್ಲಿಯೇ  ಈ ಎರಡೂ ವೃತ್ತಗಳು ಬಳಕೆಯಾಗಿರುವುದರಿಂದ, ಯಾವ ವೃತ್ತದಿಂದ ಯಾವುದು ಹುಟ್ಟಿತು ಎಂಬುದನ್ನು ನಿಶ್ಚಯಿಸುವುದು ಕಷ್ಟ..

	ಪೂರ್ವಪ್ರಸಿದ್ಧವಾದ ವೃತ್ತಗಳಿಂದ ಆದಿಯ ಅಲ್ಪವ್ಯತ್ಯಾಸದೊಡನೆ ಹೊಸ ವೃತ್ತಗಳನ್ನು ಮಾಡಿಕೊಂಡದ್ದು ಎರಡು ರೀತಿಯ ಪ್ರಯೋಜನಗಳಿಗೆ ದಾರಿಮಾಡಿತು, ಒಂದು ವೈವಿಧ್ಯಸಾಧನೆ; ಇನ್ನೊಂದು ಸೌಕರ್ಯಲಾಭ. ಇದರಿಂದಾಗಿ ಏಕಮುಖವಾದ ನಾದಲಯಗಳಲ್ಲಿ ಬಹುಮುಖತೆ ಬಂತು; ಮೂರು ನಿರ್ದಿಷ್ಟವೃತ್ತಗಳಲ್ಲಿ ನೈಪುಣ್ಯವನ್ನು ಸಾಧಿಸಿದ್ದರಿಂದ ಆರು ಬಗೆಯ ವೃತ್ತಗಳ ನಿರ್ವಹಣೆ ಅನಾಯಾಸವಾಗಿ ಕೈಗೂಡುವಂತಾಯಿತು. ಇಷ್ಟಾಗಿ ಕನ್ನಡಕ್ಕೆ ಹೊಂದಿರತಕ್ಕವು ಎಂದರೆ ಪ್ರಾಯಃ ಉತ್ಪಲಮಾಲೆ, ಚಂಪಕಮಾಲೆಗಳೆರಡೇ, ಪ್ರಮಾಣದಲ್ಲಿಯೂ ಉಳಿದವುಗಳಿಗಿಂತ ಇವೇ ಹೆಚ್ಚು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಉತ್ಪಲಚಂಪಕಗಳಲ್ಲಿ ದೇಶ್ಯಶಬ್ದಗಳ ಸೇರಿಕೆಯೂ ಶಾರ್ದೂಲಾದಿಯಾದ ಉಳಿದವುಗಳಲ್ಲಿ ಸಂಸ್ಕøತಶಬ್ದಗಳ ಹಾಗೂ ಸಮಾಸಗಳ ಸೇರಿಕೆಯೂ ಸಾಮಾನ್ಯ, ಮೊದಲಿನವು ಮೃದುತರವಾದ ಭಾವಗಳಿಗೆ, ಮತ್ತಿನವು ಘನಗಂಭೀರವಾದ ಭಾವಗಳಿಗೆ ಒಗ್ಗಿರತಕ್ಕುವು ಎಂದು ಕೂಡ ಅಭಿಪ್ರಾಯಪಡಲಾಗಿದೆ. ಆಯಾ ವೃತ್ತಗಳ ಹೆಸರಿಗೂ ಅಲ್ಲಿ ವ್ಯಕ್ತವಾಗುವ ಭಾವಭಾವನೆಗಳಿಗೂ ಹೊಂದಿಕೆಯಿದೆಯೆಂದು ಒಮ್ಮೊಮ್ಮೆ ತೋರುತ್ತದೆಯಾದರೂ ಹಾಗೆ ಹೊಂದಿಕೆಯಿಲ್ಲದೆಯೂ ಹೋಗಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.									    	 			(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ